ಬಿಕುಲ್
ಫ್ಯಾಬೇಸೀ ಕುಟುಂಬದ ಮಿಮೋಸೀ ಉಪಕುಟುಂಬಕ್ಕೆ ಸೇರಿದ ಕಾಡುಮರ. ಬಾಗೆ ಮರದ ಹತ್ತಿರ ಸಂಬಂಧಿ.  ಬೆಳ್ಳಟ್ಟೆ, ಸಾಲಬಾಗೆ ಪರ್ಯಾಯ ನಾಮಗಳು. ಆಲ್‍ಬಿಜಿóಯ ಪ್ರೋಸೆರ ವೈಜ್ಞಾನಿಕ ಹೆಸರು. ಏಷ್ಯದ ಉಷ್ಣವಲಯ ಮತ್ತು ಆಸ್ಟ್ರೇಲಿಯದ ಮೂಲನಿವಾಸಿ. ಭಾರತದಲ್ಲಿ ಹಿಮಾಲಯ ತಪ್ಪಲು, ಸಾತ್ಪುರ, ಬಿಹಾರ, ಮಧ್ಯಪ್ರದೇಶ, ಗುಜರಾತ್, ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ಅಸ್ಸಾಮ್, ಬಂಗಾಳಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

ಇದು 20-30 ಮೀ ಎತ್ತರಕ್ಕೆ ಬೆಳೆಯುವುದು. ಇದರ ತೊಗಟೆ ಮೃದು, ಚೇಗು ಗಟ್ಟಿ ಇದೆ. ಎಲೆಗಳು ಏಪ್ರಿಲ್ ತಿಂಗಳಲ್ಲಿ ಉದುರಿ ಪುನಃ ಜುಲೈ ತಿಂಗಳಲ್ಲಿ ಹೊಸದಾಗಿ ಮೂಡುವುವು. ಹೂಗಳು ಮಧ್ಯ ಭಾಗದಿಂದ ಸೆಪ್ಟಂಬರ್ ತಿಂಗಳ ತನಕವೂ ಅರಳುವುವು. 

ಬಿಕುಲನ್ನು ಬೀಜದಿಂದ ವೃದ್ಧಿಸುವುದಿದೆ. ಇದರ ಚೌಬೀನೆಯಿಂದ ವ್ಯವಸಾಯದ ಉಪಕರಣಗಳನ್ನು ಮನೆ ಕಟ್ಟಡದ ಮುಟ್ಟುಗಳನ್ನು ತಯಾರಿಸಲಾಗುತ್ತದೆ. ಅಲ್ಲದೆ ಕೊಟ್ಟಣದ ಒನಕೆಗಳು, ಸೇತುವೆ, ಗಾಲಿ, ಅಚ್ಚುಗಳು, ಟೀಪೆಟ್ಟಿಗೆ ಮುಂತಾದವನ್ನು ತಯಾರಿಸಲು ಉಪಯೋಗಿಸುವುದಿದೆ. ಇದರಿಂದ ಗೋಂದು ಟ್ಯಾನಿನ್‍ಗಳನ್ನು ಪಡೆಯಬಹುದು. ಜೊತೆಗೆ ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಇದನ್ನು ಬೆಳೆಸುವ ರೂಢಿಯೂ ಇದೆ.
(ಎಸ್‍ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ